ಕನಸು ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ : ವಿಜ್ಞಾನಿ ವಿ.ಕೋಟೇಶ್ವರ ರಾವ್
ಮಂಗಳೂರು: ಭವಿಷ್ಯದ ಬಗ್ಗೆ ಕನಸು ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಇಸ್ರೋದ ನಿಕಟಪೂರ್ವ ಕಾರ್ಯದರ್ಶಿ(ವಿಜ್ಞಾನ) ವಿ.ಕೋಟೇಶ್ವರ ರಾವ್ ಹೇಳಿದರು.
ಅವರು ಮಂಗಳೂರಿಗೆ ಸಮೀಪದ ವಳಚ್ಚಿಲ್‌ನ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ ಕ್ಯಾಂಪಸ್ಸಿನಲ್ಲಿ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ 28ನೇ ವಾರ್ಷಿಕ ದಿನಾಚರಣೆಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳನ ಅಂಗಳಕ್ಕಿಳಿಯುವ ವಿಜ್ಞಾನಿಗಳ ಸಾಧನೆ ಮತ್ತು ಬೆಂಗಳೂರಿನ ಬಾಹ್ಯಾಕಾಶ ಕೇಂದ್ರದ ಹುಟ್ಟು ಬೆಳವಣಿಗೆಯನ್ನು ಸಚಿತ್ರವಾಗಿ ವಿವರಿಸಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಬೇಕಾದ ಸಾಧ್ಯತೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಸಿಇಒ ತುಳಸಿ ಮದ್ದಿನೇನಿ ಮಾತನಾಡಿ, ಸಮಾಜದಲ್ಲಿ ಉನ್ನತ ಗೌರವ ಪ್ರಾಪ್ತಿಗಾಗಿ ಡಾಕ್ಟರ್, ಎಂಜಿನಿಯರ್ ಆಗಲು ವಿದ್ಯಾರ್ಥಿಗಳು ಕನಸು ಕಾಣುತ್ತಾರೆ. ಆದರೆ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಸಮಾಜದ ಅಂಗೀಕಾರ ಸಿಗುತ್ತದೆ. ಉತ್ತಮ ಸಾಧನೆ ಮಾಡುವ ಪ್ರವೃತ್ತಿ ಮಾನವನಿಗೆ ಪ್ರಾಚೀನ ಕಾಲದಿಂದಲೇ ಇತ್ತು. ಆದರೆ ನಮ್ಮ ಅಂತರಂಗದಲ್ಲಿ ಇನ್ನೊಬ್ಬನನ್ನು ಸೋಲಿಸುವ, ಮಣಿಸುವ ಇಚ್ಛೆ ಇರಬಾರದು. ಎಲ್ಲರೂ ಸೇರಿ ಸಾಧನೆ ಮಾಡುವ ಮನೋಬಲ ನಮ್ಮಲ್ಲಿ ಮೂಡಿಬರಬೇಕು ಎಂದರು.
ಆಹಾರ-–ನಿದ್ದೆ-–ಅಧ್ಯಯನ-–ವ್ಯಾಯಾಮಗಳಿಂದ ಜೀವನದಲ್ಲಿ ಯಶಸ್ಸು ಸಾದ್ಯ; ಆದರೆ ಯಾವತ್ತೂ ಮದ್ಯಪಾನ ಹಾಗೂ ಡ್ರಗ್ಸ್‌ಗೆ ಬಲಿಯಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಕ್ಸ್‌ಪರ್ಟ್ ಸಮೂಹಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಉಷಾಪ್ರಭಾ ಎನ್.ನಾಯಕ್ ಮಾತನಾಡಿ, ಎಂಜಿನಿಯರ್ ಮತ್ತು ಡಾಕ್ಟರ್‌ಗಳನ್ನು ಮಾತ್ರ ಉತ್ಪಾದಿಸುವುದು ಎಕ್ಸ್‌ಪರ್ಟ್ ಉದ್ದೇಶವಲ್ಲ; ಉದ್ಯಮಿಗಳನ್ನು ಸೃಷ್ಠಿಸುವ ದೂರದೃಷ್ಠಿಯನ್ನೂ ನಾವು ಹೊಂದಿದ್ದೇವೆ. ಎಕ್ಸ್‌ಪರ್ಟ್ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳೇ ಆಯೋಜಿಸಿದ ಸಿನೇಮಾ ಥಿಯೇಟರ್, ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟ ಮೇಳ ಇದಕ್ಕೆ ಸಾಕ್ಷಿ ಎಂದರು.
ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಮತ್ತು ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ವಿಜಯನ್ ವರದಿ ಮಂಡಿಸಿದರು.
ಟ್ರಸ್ಟಿಗಳಾದ ಪ್ರೊ.ಪಿ.ಶಾಂತಾರಾಮ, ಉಸ್ತಾದ್ ರಫೀಕ್ ಖಾನ್, ಬಿ.ಮಂಜುನಾಥ ಕಾಮತ್, ಆಡಿಟರ್ ಎಂ. ಜಗನ್ನಾಥ್ ಕಾಮತ್, ಎಸ್.ಎಸ್. ನಾಯಕ್, ಎಂ.ಫಾರ್ ಕಂಪೆನಿಯ ವಲಯ ಸಂಯೋಜಕ ಅನಿಲ್ ಭಂಡಾರಿ, ಎ.ಐ.ಸಿ.ಇ. ವಿಭಾಗದ ಮುಖ್ಯಸ್ಥ ವಿಪಿನ್ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರಾದ ವಿದ್ಯಾಶಾರದಾ ಜಿ.ಕೆ, ಕರುಣಾಕರ ಬಳ್ಕೂರು, ಅಲ್ಯುಮಿನಿ ಕಾರ್ಯದರ್ಶಿ ಶ್ರದ್ಧಾ ಗುಪ್ತಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದನ್ ಜಿ.ಆರ್. ಉಪಸ್ಥಿತರಿದ್ದರು.
ಎಕ್ಸ್‌ಪರ್ಟ್ ಸಮೂಹಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಉಡುಪ ವಂದಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
-----------------------------------------------------------------------------------------------------
ವರದಿ: ಸುರೇಶ್ ಕೆ., ಕನ್ನಡ ವಿಭಾಗ, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ವಳಚ್ಚಿಲ್, ಮಂಗಳೂರು.
-----------------------------------------------------------------------------------------------------
No comments:
Post a Comment