ಗಮನಸೆಳೆಯುತ್ತಿರುವ ಎಕ್ಸ್‌ಪರ್ಟ್ ಗೋದಲಿ
ಮಂಗಳೂರು: ಕ್ರಿಸ್ಮಸ್ ಪ್ರಯುಕ್ತ ಮಂಗಳೂರಿನ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ ಬೃಹತ್ ಗೋದಲಿ ತನ್ನ ಸೊಬಗಿನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ಎರಡು ವಾರಗಳಿಂದ ಪ್ರಥಮ ಪದವಿ ಪೂರ್ವ ತರಗತಿಯ ವಿಜ್ಞಾನ ವಿದ್ಯಾರ್ಥಿಗಳ `ಗ್ರೀನ್ ಎಕ್ಸ್' ಕ್ಲಬ್ಬಿನ ಸದಸ್ಯರ ಸಹಕಾರದಿಂದ ಈ ಗೋದಲಿ ಸಾಕ್ಷಾತ್ಕಾರಗೊಂಡಿದೆ. ಸುಮಾರು 7ಮೀ ಉದ್ದ ಮತ್ತು 4ಮೀ ಅಗಲವಿರುವ ಈ ಗೋದಲಿ ನಿರ್ಮಾಣದಲ್ಲಿ 18ಕ್ಕೂ ಅಧಿಕ ವಿದ್ಯಾರ್ಥಿಗಳು ಕೈಜೋಡಿಸಿದ್ದರು. ಏಸುಕ್ರಿಸ್ತನ ಜನ್ಮಸ್ಥಳ ಬೆತ್ಲೆಹೇಮ್ ಎಕ್ಸ್‌ಪರ್ಟ್ ಕ್ಯಾಂಪಸ್ಸಿನಲ್ಲಿ ಸಾಕಾರಗೊಳ್ಳಲು `ಗ್ರೀನ್ ಎಕ್ಸ್' ಕ್ಲಬ್ಬಿನ ಸಕ್ರಿಯ ಸದಸ್ಯರಾದ ರಾಹುಲ್ ಎಸ್. ಪಾಟೀಲ್ ಮತ್ತು ಅಭಿಷೇಕ್ ಉಮಾಶಂಕರ್ ಅವರ ಪರಿಶ್ರಮ, ಚಿಂತನೆ, ವಿನ್ಯಾಸಗಳು ಗೋದಲಿಯ ಅಂದಚಂದವನ್ನು ಇಮ್ಮಡಿಗೊಳಿಸಿದೆ.
ಕಳೆದ ಎರಡು ವಾರಗಳಲ್ಲಿ ಕಾಲೇಜಿನ ಸಾಮಾಜಿಕವಾಗಿ ಉಪಯೋಗಪ್ರದ ಉತ್ಪಾದಕ ಕಾರ್ಯ(SUPW) ಪೀರಿಯಡ್ ನಲ್ಲಿ ಆಸಕ್ತ ವಿದ್ಯಾರ್ಥಿಗಳು ಗೋದಲಿ ನಿರ್ಮಾಣ ಕಾರ್ಯದಲ್ಲಿ ವಿಶೇಷವಾಗಿ ನೆರವು ನೀಡಿದ್ದರು. ಕ್ರಿಸ್ಮಸ್ ದಿನದಂದು ಪೂರ್ಣಗೊಂಡ ಗೋದಲಿ ಪರಿಸರ, ಸ್ವಚ್ಛತೆಯೊಂದಿಗೆ ಭಕ್ತಿ-ಭಾವವನ್ನು ಸಹಜವಾಗಿ ಮೂಡಿಸುವಂತಿದೆ. ತಾಗಿ-ಭತ್ತದ ಮೊಳಕೆಯಿಂದ ರಚಿಸಿದ ನಕ್ಷತ್ರ, ತೂಗಾಡುವ ರಂಗುರಂಗಿನ ವಿದ್ಯುದ್ದೀಪಗಳು, ನಕ್ಷತ್ರಗಳು ಗೋದಲಿಗೆ ಮತ್ತಷ್ಟು ಮೆರುಗು ನೀಡಿದೆ.
––––––––––––––––––––––––––––––––––––––––––––––––––––––––––––––––––––––––
ವರದಿ: ಸುರೇಶ್ ಎಡನಾಡು, ಕನ್ನಡ ವಿಭಾಗ, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ವಳಚ್ಚಿಲ್, ಮಂಗಳೂರು.
––––––––––––––––––––––––––––––––––––––––––––––––––––––––––––––––––––––––
––––––––––––––––––––––––––––––––––––––––––––––––––––––––––––––––––––––––
No comments:
Post a Comment