ಶಾಸ್ತ್ರೀಯ ಸಂಗೀತದ ಶ್ರೀಮಂತಿಕೆಯನ್ನು ಕಾಪಾಡಬೇಕು
ವಳಚ್ಚಿಲ್: ಭಾರತದ ಶಾಸ್ತ್ರೀಯ ಸಂಗೀತದ ಶ್ರೀಮಂತಿಕೆಯನ್ನು ಕಾಪಾಡಬೇಕು ಎಂದು ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ಹೇಳಿದರು.
ಮಂಗಳೂರಿಗೆ ಸಮೀಪದ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜು ಕ್ಯಾಂಪಸ್ಸಿನ ‘ಟೈಮ್‌ಸ್ಕ್ವೇರ್’ನಲ್ಲಿ ಏರ್ಪಡಿಸಿದ ‘ಟೈಮ್‌ಸ್ಕ್ವೇರ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್ ಫೆಸ್ಟಿವಲ್-2014’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಯ ಗರ್ಭದಲ್ಲಿರುವಾಗಲೇ ಅನುಭವಕ್ಕೆ ಬರುವ ಹೃದಯದ ಬಡಿತ ಮಗುವಿನ ಪಾಲಿಗೆ ಚೊಚ್ಚಲ ಸಂಗೀತ. ಯಾವುದೇ ಸಂಗೀತವನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ; ಅದನ್ನು ಅನುಭವಿಸಬೇಕು. ಸಂಗೀತವೆಂದರೆ ಮೌನ. ಮೌನವನ್ನು ಒಡೆದು ಬರುವುದೇ ಸಂಗೀತ. ಸಂಗೀತ ಮೌನದಿಂದ ಅರಳಿ ಆಸ್ವಾದಕರ ಮನಸ್ಸನ್ನು ಮುದಗೊಳಿಸುತ್ತದೆ ಎಂದರು.
ಎಕ್ಸ್‌ಪರ್ಟ್ ಕಾಲೇಜಿನ ‘ಟೈಮ್‌ಸ್ಕ್ವೇರ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್ ಫೆಸ್ಟಿವಲ್-2014’ ಎಂಬ ಚೊಚ್ಚಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪದ್ಮಶ್ರೀ ಪಂಡಿತ್ ಭಜನ್ ಸೊಪೋರಿ ಮತ್ತು ಅಭಯರುಸ್ತುಂ ಸೊಪೋರಿ ಅವರ ಸಂತೂರ್ ಜುಗಲ್ಬಂದಿ ಸುಂದರ ನಾದಲೋಕವನ್ನೇ ಸೃಷ್ಟಿಸಿತು. ಇಳಿಸಂಜೆಯ ತಂಗಾಳಿಯಲ್ಲಿ ಸಂತೂರ್ ನಿನಾದ ಮಿಲನಗೊಂಡು ಸಂಗೀತ ರಸಿಕರ ಮನ ತೇಲಾಡಿತು. ಬೆಂಗಳೂರಿನ ರವೀಂದ್ರ ಯವಗಲ್ ಅವರು ತಬಲಾದಲ್ಲಿ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪದ್ಮಶ್ರೀ ಪಂಡಿತ್ ಭಜನ್ ಸೊಪೋರಿ ಅವರು, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಶ್ರಮಕಾರ್ಯ ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಟ್ರಸ್ಟಿಗಳಾದ ಉಸ್ತಾದ್ ರಫೀಖ್ ಖಾನ್, ಮಂಜುನಾಥ್ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಪ ಪ್ರಾಂಶುಪಾಲ ಗುರುದತ್ ಎನ್. ಉಪಸ್ಥಿತರಿದ್ದರು.
ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಕಲಾವಿದರನ್ನು ಸನ್ಮಾನಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ವಂದಿಸಿದರು.
No comments:
Post a Comment